ಬಾಗೇಪಲ್ಲಿ
ಕೋಲಾರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕು ಆಡಳಿತ ಕೇಂದ್ರ ಪಟ್ಟಣ. ಜಿಲ್ಲೆಯ ಉತ್ತರದಲ್ಲಿರುವ ಈ ತಾಲ್ಲೂಕನ್ನು ಪೂರ್ವ, ಪಶ್ಚಿಮ ಮತ್ತು ಉತ್ತರದಲ್ಲಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ. ಆಗ್ನೇಯದಲ್ಲಿ ಚಿಂತಾಮಣಿ. ದಕ್ಷಿಣದಲ್ಲಿ ಶಿಢ್ಲಘಟ್ಟ, ನೈಋತ್ಯದಲ್ಲಿ ಗುಡಿಬಂಡೆ ತಾಲ್ಲೂಕುಗಳು ಸುತ್ತುವರಿದಿವೆ. ಚಿಕ್ಕಬಳ್ಳಾಪುರ ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕಿನಲ್ಲಿ ಮಿಟ್ಟೆಮರಿ, ಬಾಗೇಪಲ್ಲಿ, ಚೇಳೂರು, ಪಾತಪಾಳ್ಯ ಮತ್ತು ಗೂಳೂರು ಹೋಬಳಿಗಳಿವೆ. 228 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 932.9 ಚ.ಕಿ.ಮೀ. ಜನಸಂಖ್ಯೆ 1,69,523 (2001).

ತಾಲ್ಲೂಕು ಅಲ್ಲಲ್ಲೆ ಹರಡಿರುವ ಕಣಶಿಲೆಯ ಬೆಟ್ಟಗಳಿಂದ ಕೂಡಿದ ಪ್ರದೇಶ. ಬಾಗೇಪಲ್ಲಿಯ ಪೂರ್ವಕ್ಕೆ ಉತ್ತರ-ದಕ್ಷಿಣವಾಗಿ ಹರಡಿರುವ ದೊಂಗಲಕೊಂಡ ಬೆಟ್ಟಗಳು ಗುಮ್ಮನಾಯಕನ ಪಾಳ್ಯದಿಂದ ಹೊರಟು, ಬಾಗೇಪಲ್ಲಿ ತಾಲ್ಲೂಕಿನ ಚಿತ್ರಾವತಿ ಮತ್ತು ಪಾಪಘ್ನಿ ನದೀಕಣಿವೆಗಳನ್ನು ವಿಂಗಡಿಸುತ್ತವೆ. ತಾಲ್ಲೂಕಿನ ಆಗ್ನೇಯದಲ್ಲಿ ಹರಿಯುವ ಪಾಪಾಘ್ನಿ ನದಿಗೆ ಅಡ್ಡಲಾಗಿ ವ್ಯಾಸಸಮುದ್ರ ಕೆರೆಯನ್ನು ನಿರ್ಮಿಸಲಾಗಿದೆ. ಚಿತ್ರಾವತಿ ನದಿ ತಾಲ್ಲೂಕಿನ ಪಶ್ಚಿಮದಲ್ಲಿ ಸುಮಾರು 25 ಕಿ.ಮೀ. ದೂರ ಹರಿಯುವ ವಂಡಮನ ಹೊಳೆ ಪಾಪಘ್ನಿಯ ಒಂದು ಉಪನದಿ.

ಈ ತಾಲ್ಲೂಕಿನಲ್ಲಿ ಮಳೆ ಕಡಿಮೆ, ವಾರ್ಷಿಕ ಸರಾಸರಿ 676 ಮಿ.ಮೀ. ಸೆಖೆ ಹೆಚ್ಚು ಎನ್ನಬಹುದು. ಕೆಲವೆಡೆ ಕುರುಚಲು ಕಾಡುಗಳು, ಶ್ರೀಗಂಧ, ಹುಣಿಸೆ, ಸೀತಾಫಲ, ಹೊಂಗೆ ಮುತ್ತುಗ, ಜಾಲಿ ಗಿಡಗಳೂ ಸ್ವಲ್ಪ ಹುಲ್ಲುಗಾವಲೂ ಇವೆ. ವ್ಯವಸಾಯಕ್ಕೆ ತಾಲ್ಲೂಕಿನಲ್ಲಿರುವ ಅನೇಕ ಕೆರೆ, ಕಟ್ಟೆ ಬಾವಿಗಳು ನೀರೊದಗಿಸುತ್ತವೆ. ಚಿತ್ರಾವತಿ ನದಿ ಆಸರೆಯ ರೆಡ್ಡಿಹಳ್ಳಿ ಕೆರೆ ಮತ್ತು ರಾಮಸಂದ್ರ ಕೆರೆಗಳಿಂದ ನೀರಾವರಿಗೆ ಅನುಕೂಲವಾಗಿದೆ. ರಾಗಿ, ಬತ್ತ, ಕಬ್ಬು, ತೊಗರಿ, ಹುರುಳಿ, ಮೆಣಸಿನಕಾಯಿ, ಈರುಳ್ಳಿ ಮೊದಲಾದವನ್ನು ಬೆಳೆಸುತ್ತಾರೆ. ವ್ಯವಸಾಯದ ಜೊತೆಗೆ ಪಶುಪಾಲನೆ ಇದ್ದು ಅವುಗಳ ಅಭಿವೃದ್ಧಿಗೆ, ರಕ್ಷಣೆಗೆ ತಾಲ್ಲೂಕು ಮತ್ತು ಗ್ರಾಮಮಟ್ಟದ ಪಶುವೈದ್ಯಾಲಯಗಳಿವೆ.

ಈ ತಾಲ್ಲೂಕು ಕರ್ನಾಟಕ ರಾಜ್ಯದ ಪೂರ್ವದಂಚಿನಲ್ಲಿ ಆಂಧ್ರ ಪ್ರದೇಶದ ಗಡಿಗೆ ಹತ್ತಿರವಿದ್ದು ಆಂಧ್ರ-ಕರ್ನಾಟಕ ರಾಜ್ಯಗಳ ಸುತ್ತಿನ ಪ್ರದೇಶಗಳಿಗೆ ಒಂದು ಮುಖ್ಯವಾದ ವ್ಯಾಪಾರ ಕೇಂದ್ರವಾಗಿದೆ. ಈ ತಾಲ್ಲೂಕಿನ ಬಾಗೇಪಲ್ಲಿಗೆ 3 ಕಿ.ಮೀ. ದೂರದಲ್ಲಿರುವ ದೇವರಗುಡಿಪಲ್ಲಿಯ ವೆಂಕಟರಮಣಸ್ವಾಮಿ ದೇವಾಲಯ ಬಲು ಪ್ರಸಿದ್ಧ. ಹಿಂದೆ ಒಂದು ಪಾಳೆಯ ಪಟ್ಟಾಗಿದ್ದ ಗುಮ್ಮನಾಯಕನ ಪಾಳ್ಯ ಸುಮಾರು 1922ರ ವರೆಗೂ ತಾಲ್ಲೂಕು ಕೇಂದ್ರವಾಗಿತ್ತು.

ತಾಲ್ಲೂಕು ಮತ್ತು ಹೋಬಳಿ ಆಡಳಿತ ಕೇಂದ್ರವಾಗಿರುವ ಬಾಗೇಪಲ್ಲಿ ಪಟ್ಟಣ ಚಿತ್ರಾವತಿ ನದಿಯ ಬಲದಂಡೆಯ ಮೇಲೆ, ಕೋಲಾರಕ್ಕೆ ವಾಯುವ್ಯದಲ್ಲಿ 110 ಕಿಮೀ ದೂರದಲ್ಲಿದೆ. ಜನಸಂಖ್ಯೆ 20,120 (2001). ಹಿಂದೆ ಇಲ್ಲಿ ಮೂರು ನಗರಗಳು ಇದ್ದುವೆಂದು ತಿಳಿದುಬಂದಿದೆ. ಬೆಂಗಳೂರು ಅನಂತಪುರ ರಸ್ತೆ ಬಾಗೇಪಲ್ಲಿ ಮುಖಾಂತರ ಹಾದು ಹೋಗಿದೆ. ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕಾಲೇಜುಗಳು, ಬ್ಯಾಂಕುಗಳು ಮತ್ತು ಅಂಚೆ-ತಂತಿ ವಿದ್ಯುತ್ ಸೌಲಭ್ಯಗಳಿವೆ. ಪುರಸಭೆಯ ಆಡಳಿತಕ್ಕೆ ಈ ಪಟ್ಟಣ ಒಳಪಟ್ಟಿದೆ. 					
	(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ